ವಿರಾಜಪೇಟೆ:ಕಕ್ಕಡ ತಿಂಗಳ ಸಂಭ್ರಮ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಆಚರಿಸುವ ನಿಟ್ಟಿನಲ್ಲಿ, ವಿರಾಜಪೇಟೆಯ ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ವತಿಯಿಂದ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ಮನರಂಜನೆ ಹಾಗೂ ಸ್ಥಳೀಯ ಕಲಾವಿದರ ಸಂಗೀತ ರಸಮಂಜರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವ ಮತ್ತು ಸೌಹಾರ್ದತೆಯಿಂದ ಜರುಗಿದವು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ, ವಿಧಾನ ಪರಿಷತ್ ಸದಸ್ಯೆ ಮಂಡೇಪಂಡ ಸುಜಾ ಕುಶಾಲಪ್ಪ ಅವರು, ಮಳೆಗಾಲದ(ಕಕ್ಕಡ) ಸಮಯದಲ್ಲಿ ಗ್ರಾಮೀಣ ಭಾಗದ ಹಾಗೂ ಕೃಷಿ ನಂಬಿದ ಜನರಿಗೆ ಮತ್ತು ರೈತರಿಗೆ ಕೃಷಿ ಚಟುವಟಿಕೆಗಳ ನಡುವೆ ಕೊಂಚ ಬಿಡುವು ಸಿಗುತ್ತದೆ. ಯಾವುದೇ ರೀತಿಯ ಹೆಚ್ಚಿನ ಕೆಲಸದ ಒತ್ತಡವಿಲ್ಲದ ಈ ಅವಧಿಯಲ್ಲಿ, ಕೊಡಗಿನ ಜನತೆಗೆ ಮಾನಸಿಕ ಉಲ್ಲಾಸ ನೀಡಲು ಇಂತಹ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಂಘಟಿಸಿರುವುದು ಶ್ಲಾಘನೀಯ ಎಂದರು.
ವಿಶೇಷವಾಗಿ ಹೊರಗಿನ ಕಲಾವಿದರನ್ನಷ್ಟೇ ನೆಚ್ಚಿಕೊಳ್ಳದೆ, ನಮ್ಮದೇ ನಾಡಿನ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ಕಲಾವಿದರ ಹಾಡುಗಾರಿಕೆ ಹಾಗೂ ಇತ್ತೀಚೆಗೆ ನಿರ್ಮಾಣಗೊಂಡು ಗಮನ ಸೆಳೆದಿರುವ ವಾಂಟೆಡ್ ಬಾಲ ಚಲನಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಂತಹ ವೇದಿಕೆಗಳ ಮೂಲಕ ಗುರುತಿಸಿಕೊಂಡ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಸಿನಿಮಾ, ಕಿರುತೆರೆ ಹಾಗೂ ದೊಡ್ಡ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಇದರಿಂದ ಆರ್ಥಿಕ ಮತ್ತು ವೃತ್ತಿಪರ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ,"ನಮ್ಮ ಭಾಗದ ಅಡಗಿರುವ ಕಲಾವಿದರ ಪ್ರತಿಭೆಯನ್ನು ಹೊರತರುವುದು, ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಗೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಡುವ ಮುಖ್ಯ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮೀಣ ಹಾಗೂ ಸ್ಥಳೀಯ ಮಟ್ಟದಲ್ಲಿ ಅಪಾರ ಪ್ರತಿಭೆ ಹೊಂದಿರುವ ಕಲಾವಿದರಿರುತ್ತಾರೆ. ಇಂತಹ ಕಾರ್ಯಕ್ರಮಗಳು ಅವರಲ್ಲಿರುವ ಕಲೆ, ಗಾಯನ ಮತ್ತು ನೃತ್ಯ ಸಾಮರ್ಥ್ಯವನ್ನು ಹೊರತರಲು ಪ್ರಮುಖ ವೇದಿಕೆಯಾಗುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ಸಿಕ್ಕಾಗ ಕಲಾವಿದರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಅವರು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ವೇದಿಕೆಗಳನ್ನು ತಲುಪಲು ಮೆಟ್ಟಿಲಾಗುತ್ತದೆ ಎಂದರು.
ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ನಮ್ಮ ನಾಡಿನ ಸಾಂಪ್ರದಾಯಿಕ ಕಲೆ, ಜಾನಪದ ಸಂಸ್ಕೃತಿ ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳು ಮುಂದಿನ ಪೀಳಿಗೆಗೆ ಉಳಿದು ಬೆಳೆಯುತ್ತವೆ. ನಮ್ಮವರೇ ಆದ ಕಲಾವಿದರು ವೇದಿಕೆಯ ಮೇಲೆ ಸಾಧನೆ ಮಾಡುವುದನ್ನು ಕಂಡಾಗ ಸ್ಥಳೀಯ ಜನರಲ್ಲಿ ಹೆಮ್ಮೆ ಮೂಡುತ್ತದೆ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಭಾವನೆ ಬೆಳೆಯುತ್ತದೆ. ಸಮುದಾಯದ ಒಗ್ಗಟ್ಟು ಮತ್ತು ಪ್ರೋತ್ಸಾಹ ದೊರಕಲಿದೆ ಎಂದು ತಿಳಿಸಿದರು.
ಗಾನ-ನೃತ್ಯ ವೈಭವದಿಂದ ಕಂಗೊಳಿಸಿದ ಸಭಾಂಗಣ
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನಡೆದ ಸಂಗೀತ ರಸಮಂಜರಿಯಲ್ಲಿ ಸ್ಥಳೀಯ ಗಾಯಕರು ತಮ್ಮ ಸುಶ್ರಾವ್ಯ ಕಂಠದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಪ್ರಸಿದ್ಧ ಸ್ಥಳೀಯ ಗಾಯಕರಾದ ಮಾಳೇಟಿರ ಅಜಿತ್, ಬಟ್ಟಿಯಂಡ ಲಿಖಿತ, ಬೊಪ್ಪಂಡ ತ್ರಿಶೂಲ್ ಹಾಗೂ ಟಿ.ಡಿ. ಮೋಹನ್ ಅವರು ಹಾಡಿದ ಜನಪ್ರಿಯ ಹಾಗೂ ನಾಡಿನ ಗೀತೆಗಳು ಪ್ರೇಕ್ಷಕರ ಮನ ಗೆದ್ದವು.
ಗಾಯನಕ್ಕೆ ಸಾಥ್ ನೀಡುವಂತೆ ಸಂಕೇತ್ ಶಿವಪ್ಪ, ವಿಷ್ಣು, ಕುಡುವಚೇರಿರ ಉಮೇಶ್, ದುಗ್ಗಂಡ ರಿಕ್ಕಿ ಮುತ್ತಪ್ಪ ಹಾಗೂ ಅವರ ಯುವ ತಂಡದವರಿಂದ ನಡೆದ ಬಿರುಸಿನ ನೃತ್ಯ ಪ್ರದರ್ಶನವು ಸಭಾಂಗಣದಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ ಅವರು ಕಾರ್ಯಕ್ರಮಕ್ಕೆ ಶುಭಕೋರಿ, ಸಂಸ್ಥೆಯ ಶ್ರಮವನ್ನು ಶ್ಲಾಘಿಸಿ, ಯುವ ಪೀಳಿಗೆಯು ದುರಭ್ಯಾಸಗಳಿಂದ ದೂರವಿದ್ದು, ತಮ್ಮ ಗಮನವನ್ನು ಕಲೆ, ಸಂಗೀತ ಹಾಗೂ ನೃತ್ಯದಂತಹ ಸೃಜನಶೀಲ ಕ್ಷೇತ್ರಗಳತ್ತ ಹರಿಸಲು ಇಂತಹ ವೇದಿಕೆಗಳು ಪ್ರೇರಣೆಯಾಗುತ್ತವೆ ಎಂದರು.
ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷರಾದ ಕಾಣತಂಡ ಜಗದೀಶ್ ಉಪಸ್ಥಿತರಿದ್ದರು.
ಕಾಣತಂಡ ಬೀನಾ ಜಗದೀಶ್, ಮಾಚಪಂಡ ತುಳಸಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು, ವಿವಿಧ ರಂಗಗಳ ಪ್ರಮುಖರು, ಸ್ಥಳೀಯ ಕಲಾವಿದರು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.